“ಉತ್ತಮವಾದ ಪಾತ್ರೆ ಮತ್ತು ಹೀನವಾದ ಪಾತ್ರೆ”
REV.SAMUEL D
ಬೈಬಲ್ ಪ್ರಕಾರ “ಉತ್ತಮವಾದ ಪಾತ್ರೆ” ಮತ್ತು “ಹೀನವಾದ ಪಾತ್ರೆ” ಎಂದರೇನು ಎಂಬುದನ್ನು ತಿಳಿದುಕೊಳ್ಳೋಣ, ಬೈಬಲ್‌ನಲ್ಲಿ “ಪಾತ್ರೆ” ಎಂಬ ಪದವನ್ನು ಮಾನವನ ಜೀವನ, ಹೃದಯ ಮತ್ತು ದೇವರ ಉದ್ದೇಶಕ್ಕಾಗಿ ಬಳಸುವ ಸಾಧನ ಎಂಬ ಅರ್ಥದಲ್ಲಿ ಉಪಯೋಗಿಸಲಾಗಿದೆ. ದೇವರು ಪ್ರತಿಯೊಬ್ಬನನ್ನೂ ತನ್ನ ಕಾರ್ಯಕ್ಕಾಗಿ ಒಂದು ಪಾತ್ರೆಯಂತೆ ನೋಡುತ್ತಾನೆ.
ಮುಖ್ಯವಾಗಿ ಈ ವಿಷಯವನ್ನು ನಾವು 2 ತಿಮೋಥೆಯ 2:20–21 ವಚನಗಳಲ್ಲಿ ಕಾಣುತ್ತೇವೆ.
2 ತಿಮೋಥೆಯ 2:20–21 ದೊಡ್ಡ ಮನೆಯಲ್ಲಿ ಬೆಳ್ಳಿಬಂಗಾರದ ಪಾತ್ರೆಗಳಲ್ಲದೆ ಮರದ ಪಾತ್ರೆಗಳೂ ಮಣ್ಣಿನ ಪಾತ್ರೆಗಳೂ ಇರುತ್ತವೆ; ಅವುಗಳಲ್ಲಿ ಕೆಲವು ಉತ್ತಮವಾದ ಬಳಕೆಗೂ ಕೆಲವು ಹೀನವಾದ ಬಳಕೆಗೂ ಬರುತ್ತವೆ.
1.ಉತ್ತಮವಾದ ಪಾತ್ರೆ.
ಪಾತ್ರೆ ಎಂದರೇನು ? (Meaning of Vessel) ಪಾತ್ರೆ – ದೇವರ ಕೈಯಲ್ಲಿ ಬಳಸುವ ಸಾಧನ ಮಾನವನ ಹೃದಯ, ಜೀವನ ಮತ್ತು ಸೇವೆಯನ್ನು ಸೂಚಿಸುತ್ತದೆ ಕುಂಭಾರನು ಮಣ್ಣನ್ನು ರೂಪಿಸುವಂತೆ ದೇವರು ಮಾನವನನ್ನು ರೂಪಿಸುತ್ತಾನೆ. ಕುಂಬಾರನ ಸಾಮ್ಯ
ಯೆರೆಮಿಯಾ 18:1– 6 ಯೆಹೋವನು ಯೆರೆಮೀಯನಿಗೆ – 2ನೀನೆದ್ದು ಕುಂಬಾರನ ಮನೆಗೆ ಇಳಿದುಹೋಗು; ಅಲ್ಲೇ ನನ್ನ ನುಡಿಯನ್ನು ನಿನಗೆ ಕೇಳಮಾಡುವೆನು ಎಂಬ ಮಾತನ್ನು ದಯಪಾಲಿಸಿದನು. 3ಆಗ ನಾನು ಕುಂಬಾರನ ಮನೆಗೆ ಇಳಿದುಹೋದೆನು; ಇಗೋ, ಅವನು ಚಕ್ರದ ಮೇಲೆ ತನ್ನ ಕೆಲಸವನ್ನು ನಡಿಸುತ್ತಿದ್ದನು. 4ಆ ಕುಂಬಾರನು ಜೇಡಿಮಣ್ಣಿನಿಂದ ಮಾಡುತ್ತಿದ್ದ ಪಾತ್ರೆಯು ಅವನ ಕೈಯಲ್ಲಿ ಕೆಟ್ಟು ಹೋಗಲು ಪುನಃ ತನಗೆ ಸರಿತೋಚಿದ ಹಾಗೆ ಅದನ್ನು ಹೊಸಪಾತ್ರೆಯನ್ನಾಗಿ ಮಾಡಿದನು.5ಆಗ ಯೆಹೋವನು ನನಗೆ ಈ ಮಾತನ್ನು ಅನುಗ್ರಹಿಸಿದನು – 6ಯೆಹೋವನು ಹೀಗನ್ನುತ್ತಾನೆ – ಇಸ್ರಾಯೇಲ್ ವಂಶದವರೇ, ಈ ಕುಂಬಾರನು ಮಾಡಿದಂತೆ ನಾನು ನಿಮ್ಮನ್ನು ಮಾಡಕೂಡದೋ? ಇಸ್ರಾಯೇಲ್ ಮನೆತನದವರೇ, ಜೇಡಿಮಣ್ಣು ಕುಂಬಾರನ ಕೈಯಲ್ಲಿ ಹೇಗೋ, ಹಾಗೆಯೇ ನೀವು ನನ್ನ ಕೈಯಲ್ಲಿದ್ದೀರಿ.
ಉತ್ತಮವಾದ ಪಾತ್ರೆ ಎಂದರೆ – ದೇವರ ಮುಂದೆ ಶುದ್ಧವಾಗಿ, ಪವಿತ್ರವಾಗಿ, ವಿಧೇಯತೆಯಿಂದ ಬದುಕುವ ವ್ಯಕ್ತಿಯೇ ಉತ್ತಮವಾದ ಪಾತ್ರೆ.
2ತಿಮೋಥೆಯ 2:21 ದೊಡ್ಡ ಮನೆಯಲ್ಲಿ ಬೆಳ್ಳಿಬಂಗಾರದ ಪಾತ್ರೆಗಳಲ್ಲದೆ ಮರದ ಪಾತ್ರೆಗಳೂ ಮಣ್ಣಿನ ಪಾತ್ರೆಗಳೂ ಇರುತ್ತವೆ; ಅವುಗಳಲ್ಲಿ ಕೆಲವು ಉತ್ತಮವಾದ ಬಳಕೆಗೂ ಕೆಲವು ಹೀನವಾದ ಬಳಕೆಗೂ ಬರುತ್ತವೆ. 21ಹೀಗಿರಲಾಗಿ ಒಬ್ಬನು ಹೀನ ನಡತೆಯುಳ್ಳವರ ಸಹವಾಸವನ್ನು ಬಿಟ್ಟು ತನ್ನನ್ನು ಶುದ್ಧಮಾಡಿಕೊಂಡರೆ ಅವನು ಉತ್ತಮವಾದ ಬಳಕೆಗೆ ಯೋಗ್ಯನಾಗಿರುವನು; ಅವನು ದೇವರ ಸೇವೆಗೆ ಪ್ರತಿಷ್ಠಿತನಾಗಿಯೂ ಯಜಮಾನನಿಗೆ ಉಪಯುಕ್ತನಾಗಿಯೂ ಸಕಲ ಸತ್ಕ್ರಿಯೆಗಳನ್ನು ಮಾಡುವದಕ್ಕೆ ಸಿದ್ಧನಾಗಿಯೂ ಇರುವನು.
“ಯಾರು ತಮ್ಮನ್ನು ಇವುಗಳಿಂದ ಶುದ್ಧಪಡಿಸಿಕೊಳ್ಳುವರೋ ಅವರು ಗೌರವಕ್ಕೆ ಪಾತ್ರರಾಗುವವರು, ಪವಿತ್ರರು, ಯಜಮಾನನಿಗೆ ಉಪಯುಕ್ತರು, ಎಲ್ಲ ಸತ್ಕಾರ್ಯಕ್ಕೂ ಸಿದ್ಧರಾಗಿರುವವರು ಆಗುವರು.”
ಉತ್ತಮವಾದ ಪಾತ್ರೆಯ ಲಕ್ಷಣಗಳು
1.ದೇವರ ಮುಂದೆ ಶುದ್ಧ ಹೃದಯ (ಕೀರ್ತನೆ 51:10)
2.ವಿಧೇಯತೆ ಮತ್ತು ವಿನಯ
3.ಪವಿತ್ರ ಜೀವನ 1ಪೇತ್ರ 1:15–16
4.ದೇವರ ಕಾರ್ಯಕ್ಕೆ ಸದಾ ಸಿದ್ಧತೆ
5.ಪ್ರೀತಿಯೂ, ಕ್ಷಮೆಯೂ, ಸಹನೆಯೂ ಇರುವ ಸ್ವಭಾವ
ಉದಾಹರಣೆಗಳು :
ದಾವೀದ – ಅಪೋಸ್ತಲರ ಕೃತ್ಯಗಳು 13:22 ಆಮೇಲೆ ದೇವರು ಅವನನ್ನು ತೆಗೆದುಹಾಕಿ ದಾವೀದನನ್ನು ಅವರ ಮೇಲೆ ಅರಸನನ್ನಾಗಿ ಮಾಡಿ – ಇಷಯನ ಮಗನಾದ ದಾವೀದನು ನನಗೆ ಸಿಕ್ಕಿದನು, ಅವನು ನನಗೆ ಒಪ್ಪುವ ಮನುಷ್ಯನು, ಅವನು ನನ್ನ ಇಷ್ಟವನ್ನೆಲ್ಲಾ ನೆರವೇರಿಸುವನು ಎಂಬದಾಗಿ ಅವನ ವಿಷಯದಲ್ಲಿ ಸಾಕ್ಷಿಹೇಳಿದನು.
ಮೋಶೆ – ಸಂಖ್ಯಾಕಾಂಡ 12:3 ಆ ಮೋಶೆ ಭೂವಿುಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕನು.
2.ಹೀನವಾದ ಪಾತ್ರೆ: ಹೀನವಾದ ಪಾತ್ರೆ ಎಂದರೆ ದೇವರ ಇಚ್ಛೆಗೆ ವಿರುದ್ಧವಾಗಿ, ಪಾಪದಲ್ಲಿ, ಅಶುದ್ಧತೆಯಲ್ಲಿ ಜೀವಿಸುವ ವ್ಯಕ್ತಿ.ಅಗೌರವದ ಪಾತ್ರೆಯಾಗಿರುವುದು ಎಂದರೇನು?
ಅಗೌರವದ ಪಾತ್ರೆಗಳು ಎಂದರೆ ಕ್ರೈಸ್ತರಾಗಲಿ ಅಥವಾ ಸರಳವಾಗಿ ಪ್ರಾಧ್ಯಾಪಕರಾಗಲಿ, ಯಾವುದೇ ರೀತಿಯ ದುಷ್ಟತನದಿಂದ ಕಲುಷಿತರಾದವರು ಅಥವಾ ಕರ್ತನ ನಾಮವನ್ನು ಅಗೌರವಿಸುವ ಯಾವುದೇ ಕೆಲಸದಲ್ಲಿ ತೊಡಗಿರುವವರು. ರೋಮಾಪುರದವರಿಗೆ 9:21–22 ಉತ್ತಮವಾದ ಬಳಕೆಗೆ ಒಂದು ಪಾತ್ರೆಯನ್ನೂ ಹೀನವಾದ ಬಳಕೆಗೆ ಮತ್ತೊಂದು ಪಾತ್ರೆಯನ್ನೂ ಒಂದೇ ಮುದ್ದೆಯಿಂದ ಮಾಡುವದಕ್ಕೆ ಕುಂಬಾರನಿಗೆ ಮಣ್ಣಿನ ಮೇಲೆ ಅಧಿಕಾರವಿಲ್ಲವೋ?
ಹೀನವಾದ ಪಾತ್ರೆಯ ಲಕ್ಷಣಗಳು
1.ಪಾಪದಲ್ಲಿ ಮುಂದುವರಿಯುವ ಜೀವನ
1ಯೋಹಾನ 3:4 ಪಾಪಮಾಡುವ ಪ್ರತಿಯೊಬ್ಬನು ಅಧರ್ಮವನ್ನು ಮಾಡುವವನಾಗಿದ್ದಾನೆ;ಪಾಪವು ಅಧರ್ಮವೇ.
2.ಅಹಂಕಾರ ಮತ್ತು ವಿಧೇಯತೆಯ ಕೊರತೆ
ಫಿಲಿಪ್ಪಿಯವರಿಗೆ 2:3 ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ. ಜ್ಞಾನೋಕ್ತಿಗಳು 11:2 ಎಲ್ಲಿ ಹೆಮ್ಮೆಯೋ ಅಲ್ಲಿ ನಾಚಿಕೆ; ದೀನರಲ್ಲಿ ಜ್ಞಾನ.
3.ದೇವರ ಮಾತಿಗೆ ಕಿವಿಗೊಡದ ಹೃದಯ
ಜ್ಞಾನೋಕ್ತಿಗಳು 28:9 ಧರ್ಮೋಪದೇಶಕ್ಕೆ ಕಿವಿಗೊಡದವನು ಮಾಡುವ ದೇವಪ್ರಾರ್ಥನೆಯೂ ಅಸಹ್ಯ.ಯೆರೆಮೀಯ 11:5 ನಾನು ಅವರಿಗೆ ವಿಧಿಸಿದ ನಿಬಂಧನವಾಕ್ಯಗಳಿಗೆ ಕಿವಿಗೊಡದವನು ಶಾಪಗ್ರಸ್ತನಾಗಲಿ ಎಂಬದಾಗಿ ಇಸ್ರಾಯೇಲ್ಯರ ದೇವರಾದ ಯೆಹೋವನು ನುಡಿಯುತ್ತಾನೆಂದೇ ಸಾರಬೇಕು. ಆಗ ನಾನು – ಅಪ್ಪಣೆಯಂತಾಗಲಿ, ಯೆಹೋವನೇ, ಎಂದು ಉತ್ತರಕೊಟ್ಟೆನು.ಅಪೊಸ್ತಲರ ಕೃತ್ಯಗಳು 3:23 ಆ ಪ್ರವಾದಿಯ ಮಾತನ್ನು ಕೇಳದಿರುವ ಪ್ರತಿಯೊಬ್ಬನು ನಮ್ಮ ಜನರೊಳಗಿಂದ ಸಂಪೂರ್ಣವಾಗಿ ನಾಶವಾಗುವನು ಎಂಬದೇ.
4.ಸ್ವಾರ್ಥಪೂರ್ಣ ಜೀವನ
ಫಿಲಿಪ್ಪಿಯವರಿಗೆ 2:4 ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.
2ತಿಮೊಥೆಯನಿಗೆ 3:1-2 ಆದರೆ ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ ದೂಷಕರೂ,ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ…
5.ದೇವರ ಕಾರ್ಯಕ್ಕೆ ಅಯೋಗ್ಯತೆ
ಫಿಲಿಪ್ಪಿಯವರಿಗೆ 2:21 ಎಲ್ಲರೂ ಸ್ವಕಾರ್ಯಗಳ ಮೇಲೆ ಮನಸ್ಸಿಡುತ್ತಾರೆಯೇ ಹೊರತು ಯೇಸು ಕ್ರಿಸ್ತನ ಕಾರ್ಯಗಳ ಮೇಲೆ ಮನಸ್ಸಿಡುವದಿಲ್ಲ.
ಉದಾಹರಣೆಗಳು: ಫರೋಹ,ಇಸ್ಕರಿಯೊತ ಯೂದ, ಇವರು ದೇವರ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ ಕಾರಣ ಹೀನ ಪಾತ್ರೆಗಳಾದರು.
3.ಹೀನ ಪಾತ್ರೆಯಿಂದ ಉತ್ತಮ ಪಾತ್ರೆಯಾಗಲು ಮಾರ್ಗ (How to Become a Vessel of Honor)
1.ಪಶ್ಚಾತ್ತಾಪ – ಪಾಪಗಳಿಂದ ತಿರುಗಿಕೊಳ್ಳುವುದು.
ಯೆಹೆಜ್ಕೆಲ 18:21 ಆದರೆ ದುಷ್ಟನು ತಾನು ಮಾಡುತ್ತಿದ್ದ ಪಾಪಗಳನ್ನೆಲ್ಲಾ ಬಿಟ್ಟುಬಿಟ್ಟು ನನ್ನ ಸಕಲ ವಿಧಿಗಳನ್ನು ಕೈಕೊಂಡು ನೀತಿನ್ಯಾಯಗಳನ್ನು ನಡಿಸಿದರೆ ಸಾಯನು, ಬಾಳೇ ಬಾಳುವನು.
2.ಶುದ್ಧೀಕರಣ – ದೇವರ ವಾಕ್ಯ ಮತ್ತು ರಕ್ತದ ಮೂಲಕ.
1ಯೋಹಾನ 1:7 ಆದರೆ ಆತನು ಬೆಳಕಿನಲ್ಲಿರುವಂತೆಯೇ ನಾವು ಬೆಳಕಿನಲ್ಲಿ ನಡೆದರೆ ನಾವು ಒಬ್ಬರ ಸಂಗಡಲೊಬ್ಬರು ಅನ್ಯೋನ್ಯತೆಯಲ್ಲಿದ್ದೇವೆ, ಮತ್ತು ಆತನ ಮಗನಾದ ಯೇಸುವಿನ ರಕ್ತವು ಸಕಲಪಾಪವನ್ನು ನಿವಾರಣಮಾಡಿ ನಮ್ಮನ್ನು ಶುದ್ಧಿಮಾಡುತ್ತದೆ.
3.ವಿಧೇಯತೆ – ದೇವರ ಇಚ್ಛೆಗೆ ಸಂಪೂರ್ಣ ಶರಣಾಗು.
ಯಾಕೋಬ 4:7 ಹೀಗಿರಲಾಗಿ ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ, ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.
4.ಪವಿತ್ರ ಆತ್ಮನ ನೇತೃತ್ವ-
ಗಲಾತ್ಯದವರಿಗೆ 5:16 ನಾನು ಹೇಳುವದೇನಂದರೆ ಪವಿತ್ರಾತ್ಮನನ್ನು ಅನುಸರಿಸಿ ನಡೆದುಕೊಳ್ಳಿರಿ; ಆಗ ನೀವು ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವದಿಲ್ಲ.
ಚಿಂತನೆಗಾಗಿ ಪ್ರಶ್ನೆಗಳು (Discussion Questions)
1.ನಾನು ದೇವರ ಕೈಯಲ್ಲಿ ಯಾವ ರೀತಿಯ ಪಾತ್ರೆಯಾಗಿದ್ದೇನೆ ?
2.ನನ್ನ ಜೀವನದಲ್ಲಿ ದೇವರಿಗೆ ಅಯೋಗ್ಯವಾಗಿರುವ ವಿಷಯಗಳಿವೆಯೇ ?
3.ಉತ್ತಮವಾದ ಪಾತ್ರೆಯಾಗಲು ನಾನು ಯಾವ ಬದಲಾವಣೆಗಳನ್ನು ಮಾಡಬೇಕು ?
ಉಪಸಂಹಾರ (Conclusion)
ದೇವರು ಪ್ರತಿಯೊಬ್ಬನನ್ನೂ ಗೌರವಕ್ಕೆ ಪಾತ್ರವಾಗುವ ಪಾತ್ರೆಯಾಗಿ ಬಳಸಲು ಬಯಸುತ್ತಾನೆ. ನಮ್ಮ ಆಯ್ಕೆಗಳು ಮತ್ತು ವಿಧೇಯತೆ ನಮ್ಮನ್ನು ಉತ್ತಮ ಅಥವಾ ಹೀನ ಪಾತ್ರೆಯನ್ನಾಗಿ ಮಾಡುತ್ತವೆ.ದೇವರು ಯಾರನ್ನೂ ಹುಟ್ಟಿನಿಂದಲೇ “ಹೀನ ಪಾತ್ರೆ” ಆಗಿ ಸೃಷ್ಟಿಸುವುದಿಲ್ಲ.ನಮ್ಮ ಆಯ್ಕೆ, ಜೀವನ ಶೈಲಿ ಮತ್ತು ವಿಧೇಯತೆ ನಮಗೆ ಯಾವ ಪಾತ್ರೆಯಾಗಬೇಕೆಂದು ನಿರ್ಧರಿಸುತ್ತದೆ. ಪಶ್ಚಾತ್ತಾಪ ಮತ್ತು ಶುದ್ಧೀಕರಣದ ಮೂಲಕ ಹೀನ ಪಾತ್ರೆಯೂ ಉತ್ತಮ ಪಾತ್ರೆಯಾಗಬಹುದು.ಉದಾ: ಆದಾಮನನ್ನು ದೇವರು ಉತ್ತಮವಾದ ಪಾತ್ರೆಯಾಗಿ ಸೃಷ್ಠಿಸಿದನು ಆದರೆ ಅವನು ಹಣ್ಣು ತಿನ್ನುವ ವಿಷಯದಲ್ಲಿ ಆಯ್ಕೆಯಲ್ಲಿ ತಪ್ಪು ಮಾಡಿದನು. ಯೆಹೆಜ್ಕೆಲ 18:21-22 ಆದರೆ ದುಷ್ಟನು ತಾನು ಮಾಡುತ್ತಿದ್ದ ಪಾಪಗಳನ್ನೆಲ್ಲಾ ಬಿಟ್ಟುಬಿಟ್ಟು ನನ್ನ ಸಕಲ ವಿಧಿಗಳನ್ನು ಕೈಕೊಂಡು ನೀತಿನ್ಯಾಯಗಳನ್ನು ನಡಿಸಿದರೆ ಸಾಯನು, ಬಾಳೇ ಬಾಳುವನು. 22ಅವನು ಮಾಡಿದ ಯಾವ ಅಪರಾಧವೂ ಅವನ ಲೆಕ್ಕಕ್ಕೆ ಸೇರಿಸಲ್ಪಡದು, ಅವನು ಮಾಡುತ್ತಿರುವ ಸದ್ಧರ್ಮದಿಂದಲೇ ಅವನು ಬಾಳುವನು.ದೇವರ ಕೈಯಲ್ಲಿ ಉತ್ತಮವಾದ ಪಾತ್ರೆಯಾಗಲು ನಾವು ಪ್ರತಿದಿನವೂ ನಮ್ಮನ್ನು ಶುದ್ಧಪಡಿಸಿಕೊಳ್ಳಬೇಕು, ದೇವರ ವಾಕ್ಯದಲ್ಲಿ ನೆಲೆಸಬೇಕು ಮತ್ತು ಪವಿತ್ರ ಜೀವನ ನಡೆಸಬೇಕು.
ಪ್ರಾರ್ಥನೆ: “ಕರ್ತನೇ, ನನ್ನನ್ನು ನಿನ್ನ ಗೌರವಕ್ಕೆ ಉಪಯೋಗವಾಗುವ ಉತ್ತಮವಾದ ಪಾತ್ರೆಯಾಗಿ ರೂಪಿಸು.”